ಇಳಿಮುಖ ಉಪಯುಕ್ತತೆಯ ಸೂತ್ರ-
ಯಾವುದೇ ಸರಕನ್ನು ಹೆಚ್ಚು ಹೆಚ್ಚು ಪ್ರಮಾಣದಲ್ಲಿ ಪಡೆದಾಗ, ಯಾವುದೋ ಒಂದು ಘಟ್ಟದ ಅನಂತರ ಅದರ ಬಯಕೆಯ ತೀವ್ರತೆ ಕಡಿಮೆಯಾಗುತ್ತ ಹೋಗುವುದೆಂಬ ಅನುಭವಸಿದ್ಧವೂ ಸ್ವಾಭಾವಿಕವೂ ಆದ ವಿಷಯವನ್ನು ನಿರ್ದಿಷ್ಟವಾಗಿ ನಿರೂಪಿಸುವ ಅರ್ಥಶಾಸ್ತ್ರಸೂತ್ರ. ಒಬ್ಬ ಅನುಭೋಗಿಯ ಇತರ ಸರಕುಗಳ ಅನುಭೋಗ ಏಕರೀತಿಯಾಗಿದ್ದು, ಒಂದು ಸರಕಿನ ಅನುಭೋಗವನ್ನು ಆತ ಹೆಚ್ಚಿಸುತ್ತ ಹೋದರೆ, ಹೀಗೆ ಹೆಚ್ಚುವ ಪ್ರಮಾಣದ ಸರಕಿನ ಅಂಚಿನ ಉಪಯುಕ್ತತೆ (ಎಂದರೆ ಆ ಸರಕಿನ ಅಂಚಿನ ಘಟಕದ ಉಪಯುಕ್ತತೆ) ಕ್ರಮೇಣ ಇಳಿಯುತ್ತ ಸಾಗುತ್ತದೆ.

	ಒಬ್ಬ ಅನುಭೋಗಿ ತಾನು ಬಯಸುವ ಸರಕೊಂದನ್ನು ಸಮಾನ ಪ್ರಮಾಣದ ಘಟಕಗಳಲ್ಲಿ ಒಂದೊಂದು ಘಟಕವನ್ನಾಗಿ ಪಡೆಯುತ್ತ ಹೋಗುವನೆಂದೂ ಹೀಗೆ ಒಂದೊಂದಾಗಿ 5 ಘಟಕಗಳನ್ನು ಪಡೆಯುವನೆಂದೂ ಊಹಿಸಿದ ಪಕ್ಷದಲ್ಲಿ ಮೊದಲನೆಯ ಘಟಕದಿಂದ ಇಂತಿಷ್ಟು ಪ್ರಮಾಣದ ತೃಪ್ತಿ ದೊರಕುವುದೆಂದು ಭಾವಿಸಿದರೆ, ಎರಡು, ಮೂರು, ನಾಲ್ಕು ಮತ್ತು ಐದನೆಯ ಘಟಕಗಳ ಅನುಭೋಗದಿಂದ ಆತ ಹೊಂದುವ ಒಟ್ಟು ತೃಪ್ತಿಯ ಪ್ರಮಾಣ ಕ್ರಮವಾಗಿ ಹೆಚ್ಚಬಹುದಾದರೂ ಆ ಸರಕಿನ ಯಾವುದೋ ಘಟ್ಟದಿಂದ ಮುಂದಕ್ಕೆ ಇಳಿಯುತ್ತ ಹೋಗಬಹುದು. ಹೀಗೆ ಕ್ರಮ ಕ್ರಮವಾಗಿ ಸಮಪ್ರಮಾಣದಲ್ಲಿ ಅಧಿಕಾಧಿಕವಾಗಿ ಆತ ಪಡೆಯುತ್ತಿರುವ ಒಂದೊಂದು ಹೆಚ್ಚಿನ ಘಟಕವೂ ಅಂಚಿನ ಘಟಕ. ಇದರ ಉಪಯುಕ್ತತೆಯೇ ಅಂಚಿನ ಉಪಯುಕ್ತತೆ, ಈ ಅಂಚಿನ ಉಪಯುಕ್ತತೆ ಒಂದು ಘಟ್ಟದಿಂದಾಚೆಗೆ ಇಳಿಯುತ್ತ ನಡೆಯುತ್ತದೆ; ಸೊನ್ನೆಯತ್ತ ಸಾಗುತ್ತದೆ. ಈ ಅಂಚಿನ ಘಟಕದಿಂದ ಲಭಿಸಿದ ತೃಪ್ತಿ ಅಥವಾ ಉಪಯುಕ್ತತೆ ಸೊನ್ನೆಯನ್ನು ತಲುಪಿದಾಗ ಆ ಸರಕಿನ ಎಲ್ಲ ಘಟಕಗಳ ಒಟ್ಟು ಉಪಯುಕ್ತತೆ ಪರಮಾವಧಿ ಮುಟ್ಟಿದಂತೆ. ಅಲ್ಲಿಂದ ಮುಂದೆ ಆ ಸರಕಿನ ಉಪಯುಕ್ತತೆ ಧನಾತ್ಮಕವಾಗಿರದೆ ಋಣಾತ್ಮಕವಾಗುತ್ತದೆ. ಆದ್ದರಿಂದ ಅದು ಆ ಹಂತಮುಟ್ಟುವ ಮುನ್ನವೇ ಅನುಭೋಗಿ ಆ ಸರಕು ಪಡೆಯುವುದನ್ನು ನಿಲ್ಲಿಸುತ್ತಾನೆ. ಆ ಸರಕು ಪುಕ್ಕಟೆ ದೊರಕುವುದಾದರೆ ಅಂಚಿನ ಉಪಯುಕ್ತತೆ ಸೊನ್ನೆ ಆಗುವವರೆಗೂ ಅದರ ಅನುಭೋಗವನ್ನು ಆತ ಮುಂದುವರಿಸಿಯಾನು, 

ಚಿತ್ರ-1

ಅದಕ್ಕೆ ಬೆಲೆ ಕೊಡಬೇಕಾಗಿದ್ದಲ್ಲಿ, ಅದರ ಅಂಚಿನ ಘಟಕಕ್ಕಾಗಿ ಹಣ ಕೊಡುವುದರ ಅನುಪಯುಕ್ತತೆಯನ್ನು (ಡಿಸ್‍ಯುಟಿಲಿಟಿ) ಸರಕಿನಿಂದ ಲಭಿಸುವ ಉಪಯುಕ್ತತೆಯೊಡನೆ ಹೋಲಿಸಿ, ಉಚಿತವೆನಿಸುವ ಹಂತದಲ್ಲಿ ಆತ ಅದರ ಅನುಭೋಗ ನಿಲ್ಲಿಸುತ್ತಾನೆ. ಪದಾರ್ಥದ ಒಟ್ಟು ಉಪಯುಕ್ತತೆ ಇಳಿಮುಖದರದಲ್ಲೇ ಹೆಚ್ಚಾಗುವುದನ್ನು ಮುಂದೆ ಕೊಟ್ಟಿರುವ ಒಂದನೆಯ ನಕ್ಷೆಯೂ ಅಂಚಿನ ಉಪಯುಕ್ತತೆ ಇಳಿಮುಖವಾಗುವುದನ್ನು ಎರಡನೆಯ ನಕ್ಷೆಯೂ ತೋರಿಸುತ್ತದೆ.

	ಮೊದಲನೆಯ ನಕ್ಷೆಯಲ್ಲಿ ಒಟ್ಟು ಉಪಯುಕ್ತತೆಯನ್ನು ತೋರಿಸಿದೆ. ಅನುಭೋಗಿ ಬಳಸುವ ಸರಕಿನ ಘಟಕ ಸಂಖ್ಯೆ ಏರಿದಂತೆ ಆತನಿಗೆ ಅವುಗಳ ಉಪಯುಕ್ತತೆ ಒಟ್ಟಿನಲ್ಲಿ ಏರುತ್ತ ಸಾಗಿದೆಯೆಂಬುದನ್ನು ಆ ಕಂಬಗಳ ಎತ್ತರ ಹೆಚ್ಚುತ್ತಿರುವುದರಿಂದ ಗೊತ್ತಾಗುತ್ತದೆ. ಆದರೆ ಹೀಗೆ ಅಧಿಕವಾಗಿ ಅನುಭೋಗಿಸುತ್ತ ಹೋದಂತೆಲ್ಲ ಆ ಸರಕಿನ ಅಂಚಿನ ಘಟಕದ ಉಪಯುಕ್ತತೆ ಕಡಿಮೆಯಾಗುತ್ತದೆಂಬುದನ್ನು ಆಯಾ ಘಟ್ಟಗಳ ಕಂಬಗಳ ಕಪ್ಪು ಛಾಯೆಯ ಭಾಗಗಳಿಂದ ವ್ಯಕ್ತವಾಗುತ್ತದೆ. ಎಂದರೆ ಆ ಸರಕುಗಳ ಒಟ್ಟು ಉಪಯುಕ್ತತೆ ಇಳಿಯುವ ದರದಲ್ಲಿ ಏರುತ್ತದೆ.

	ಎರಡನೆಯ ನಕ್ಷೆಯಲ್ಲಿ ಅಂಚಿನ ಉಪಯುಕ್ತತೆಯನ್ನು ಮಾತ್ರವೇ ತೋರಿಸಿದೆ. ಇದು ಹೇಗೆ ಇಳಿಯುತ್ತ ಸಾಗುತ್ತದೆಂಬುದನ್ನು ಎತ್ತರ ಕಡಿಮೆಯಾಗುತ್ತ ಸಾಗುವ ಐದು ಕಂಬಗಳೂ ಸೂಚಿಸುತ್ತವೆ. ಆರನೆಯ ಘಟಕದ ಘಟ್ಟದಲ್ಲಿ ಅಂಚಿನ ಉಪಯುಕ್ತತೆ ಸೊನ್ನೆ. ಅಲ್ಲಿಂದ ಮುಂದೆ ಅನುಪಯುಕ್ತತೆ. 

ಚಿತ್ರ-2

	ಉಪಯುಕ್ತತೆಯನ್ನು ಒಂದು ರೀತಿಯಾಗಿ ಅಳೆಯುವುದು ಸಾಧ್ಯ. ಆದರೆ ಈ ಪ್ರಯತ್ನ ಮಾಡುವ ಮೊದಲು ಈ ಕೆಲವು ಊಹೆಗಳು ಅವಶ್ಯ : ಅನುಭೋಗಿಸುವ ಸರಕುಗಳ ಸಮಾನ ಗುಣವುಳ್ಳವಾಗಿರಬೇಕು; ಅನುಗುಣ ಪ್ರಮಾಣದ ಘಟಕಗಳಾಗಿರಬೇಕು; ಅನುಭೋಗಿಗಳ ಅಭಿರುಚಿ ಏಕರೀತಿ ಇರಬೇಕು; ಒಂದು ಘಟಕವನ್ನು ಪಡೆದ ಮೇಲೆ ಇನ್ನೊಂದು ಘಟಕ ಪಡೆಯುವ ವರೆಗಿನ ಕಾಲ ಹೆಚ್ಚಿರಬಾರದು. ಇಳಿಮುಖ ಉಪಯುಕ್ತತೆಯ ಸೂತ್ರ ಈ ಊಹೆಗಳನ್ನೇ ಅವಲಂಬಿಸಿದೆ. ಈ ಸೂತ್ರವನ್ನು ಪ್ರಪಂಚದ ವಾಸ್ತವ ಸಂದರ್ಭಗಳಿಗೆ ಅನ್ವಯಿಸುವಾಗ ಇರುವ ಇತಿಮಿತಿಗಳೆಷ್ಟೆಂಬುದು ಇದರಿಂದ ಸ್ಪಷ್ಟ.

	ಸರಕುಸೇವೆಗಳ ಅನುಭೋಗದಲ್ಲಿ ತೋರುವ ಇಳಿಮುಖ ಉಪಯುಕ್ತತೆಯ ಪ್ರವೃತ್ತಿಯಿಂದಾಗಿ ಮಿತವ್ಯಯ ದೃಷ್ಟಿಯಿಂದ ಅನುಭೋಗಿ ಹೇಗೆ ವರ್ತಿಸಬಹುದೆಂಬುದರ ಅಧ್ಯಯನಕ್ಕೂ ಹಣ, ಬೇಡಿಕೆ, ಬೆಲೆ, ತೆರಿಗೆ, ವೆಚ್ಚ, ಮುಂತಾದ ಅರ್ಥ ಮೀಮಾಂಸೆಯ ಅನೇಕ ವಿಭಾಗಗಳ ವಿಶ್ಲೇಷಣೆಗೂ ಈ ಸೂತ್ರ ಸಹಾಯಕ.
(ಎ.ಪಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ